ಶ್ರೀಮಠದ ಪರಿಚಯ

ಶ್ರೀಮಠವು ತನ್ನ ಸುತ್ತಮುತ್ತಲಿನ ಬೇಡ, ಕಾಡ ಜನರನ್ನು ಒಕ್ಕಲುತನ ಮಾಡಲು ಪ್ರೋತ್ಸಾಹಿಸಿದ ಮಠ. ಹೀಗಿರುವಾಗ ಶ್ರೀಮಠವು ಕೂಡ ಪ್ರಾರಂಭದಿಂದಲೂ ಕೃಷಿ ಕಾಯಕವನನ್ನು ಪಾಲಿಸಿಕೊಂಡು ಬರುತ್ತಲಿದೆ. “ಅನ್ನಂ ಪರಬ್ರಹ್ಮ” ಎಂಬ ಲೋಕೋಕ್ತಿಯಂತೆ ಶ್ರೀಮಠಕ್ಕೆ ಬರುವ ಭಕ್ತಾದಿಗಳು ಪ್ರಸಾದ ಸ್ವೀಕರಿಸಿಯೇ ಹೋಗಬೇಕೆಂದು ದಾಸೋಹದ ವ್ಯವಸ್ಥೆಯನ್ನು ಆದಿಕಾಲದಿಂದಲೂ ಮಾಡಿಕೊಂಡು ಬರುತ್ತಲಿದೆ. ಹೊರಗಿನ ಹಳ್ಳಿಗಳಿಗೆ ಹೋಗಿ ವರ್ಷಕ್ಕೊಮ್ಮೆ ಕ್ವಾರಣ್ಯ ಭಿಕ್ಷೆ ಮಾಡಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಬರುತ್ತಿದ್ದರು. ಮುಂದೆ ಭಕ್ತಾದಿಗಳು ಮತ್ತು ವಿದ್ಯಾರ್ಥಿನಿಲಯದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದುದರಿಂದ ಕೃಷಿ ಭೂಮಿಯನ್ನು ವಿಸ್ತರಿಸಿ ಹೆಚ್ಚು ವ್ಯವಸಾಯ ಮಾಡಲು ಮಠ ಮುಂದಾಯಿತು. ಬಹುತೇಕ ಶ್ರೀಮಠದ ಜಮೀನಿನಲ್ಲಿ ಬೆಳೆದ ಧಾನ್ಯದಲ್ಲೇ ಮಠದ ದಾಸೋಹ ಮುಂದುವರಿಯುವಂತಾಯಿತು. ಶ್ರೀಮಠದಲ್ಲಿ ವ್ಯಾಸಂಗದ ಜೊತೆಗೆ ವಿದ್ಯಾರ್ಥಿಗಳಿಗೆ ಕೃಷಿ ಕಾಯಕ ತತ್ವವು ಕಲಿಯುವಂತೆ ರಜಾ ದಿನಗಳಲ್ಲಿ ಮಠದ ಜಮೀನಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸುತ್ತಾ ಕೃಷಿಯ ಪರಿಚಯವನ್ನು ಮಾಡಿಕೊಡುತ್ತಿದ್ದರು.

ಶ್ರೀಮಠದ ಜಮೀನಿನಲ್ಲಿ ರಾಗಿ, ಜೋಳ, ಅವರೆ, ಸಾಸಿವೆ, ಹುಚ್ಚೆಳ್ಳು, ಸಾಮೆ, ನವಣೆ, ಹಾರಕ, ಮುಂತಾದ ಧಾನ್ಯಗಳನ್ನು ಬೆಳೆಯುವುದರ ಜೊತೆಗೆ ವಾಣಿಜ್ಯ ಬೆಳೆಗಳಾದ ಅರಿಸಿನ ಸೂರ್ಯಕಾಂತಿಗಳನ್ನು ಸಹ ಬೆಳೆಯಲಾಗುತ್ತದೆ. ಕ್ರಮೇಣ ಸಿರಿಧಾನ್ಯಗಳಾದ ಸಾಮೆ, ನವಣೆ, ಹಾರಕ ಮುಂತಾದ ಧಾನ್ಯಗಳನ್ನು ಬೆಳೆಯುವುದು ಕಡಿಮೆಯಾಗಿ ಕೇವಲ ರಾಗಿ ಮತ್ತು ಇತರೆ ಧಾನ್ಯಗಳನ್ನು ಬೆಳೆಯುವಂತಾಯಿತು. ಆದರೂ ಪ್ರಸ್ತುತ ಇರುವ ಶ್ರೀಶಾಂತಮಲ್ಲಿಕಾರ್ಜುನಸ್ವಾಮಿಗಳ ಒಲವಿನಿಂದ ಹಿಂದಿನ ಆಹಾರಪದ್ಧತಿ, ಇಂದಿನ ಜನಾಂಗಕ್ಕೆ ಅಗತ್ಯವೆಂಬುದನ್ನು ಮನಗಂಡು ಮತ್ತೆ ಮಠದ ಜಮೀನಿನಲ್ಲಿ ಸಿರಿಧಾನ್ಯವನ್ನು ಬೆಳೆಯುವ ಪರ್ವಕ್ಕೆ ನಾಂದಿ ಹಾಡಿರುವುದು ವಿಶೇಷವಾಗಿದೆ.

ಶ್ರೀ ಸಾಲೂರು ಮಠದ ಇತಿಹಾಸ

ವಿಳಾಸ

ಶ್ರೀ ಸಾಲೂರು ಬೃಹನ್ಮಠ,
ಮಲೆ ಮಹದೇಶ್ವರ ಬೆಟ್ಟ, ಹನೂರು ತಾಲೂಕು,
ಚಾಮರಾಜನಗರ ಜಿಲ್ಲೆ – 571490

ಸಂಪರ್ಕ ಸಂಖ್ಯೆ: 082-25295551
ಇ-ಮೇಲ್: srisalurumathmmhills@gmail.com

© Sri Saluru Math 2022. | All rights reserved.