ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠಕ್ಕೆ ಪ್ರತಿ ವರ್ಷದ ಆಗಸ್ಟ್ 8ನೇ ತಾರೀಖು ವಿಶೇಷ ದಿನ. ಸಾಮಾಜಿಕ ಬದ್ಧತೆ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಚಿಂತನೆ, ಮಾನವೀಯತೆ.. ಇಂತಹ ಹಲವು ಗುಣಗಳಿರುವ ವಿದ್ಯಾವಂತ ಯುವಕ ಸರ್ವಸಂಗ ಪರಿತ್ಯಾಗ ಮಾಡಿ ಮಠದ ಪೀಠ ಅಲಂಕರಿಸಿದ ಅರ್ಥಪೂರ್ಣ ದಿನ. ೨೦೨೦ರ ಆ.೮ ರಂದು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠದ ಉತ್ತರಾಧಿಕಾರಿಯಾದರು. ಅಂದು (ಶನಿವಾರ) ಬೆಳಗ್ಗೆ ೪.೩೦ರ ಬ್ರಾಹ್ಮೀ ಮುಹೂರ್ಥದಲ್ಲಿ ಶ್ರೀಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವ ನೆರವೇರಿತು. ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ಮಠದಲ್ಲಿ ಬೆಳಗ್ಗೆ ಪಂಚಕಳಸ ಪೂಜಾಪೂರ್ವಕ, ಶ್ರೀಕರ್ತೃ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಷ್ಟೋತ್ತರ ಶತನಾಮಾವಳಿ ಇನ್ನಿತರ ಪೂಜಾ ಕೈಂಕರ್ಯಗಳು ಜರುಗಿದವು. ಈ ವೇಳೆ ನಿಕಟಪೂರ್ವ ಮಠಾಧ್ಯಕ್ಷರಾದ ಶ್ರೀಗುರುಸ್ವಾಮಿಜಿ ಅವರು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಗೆ ಆಶೀರ್ವದಿಸಿದರು. ಬಳಿಕ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಕನಕಪುರ ದೇಗುಲ ಮಠದ ಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರಿಗೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ನಿಕಟಪೂರ್ವ ಮಠಾಧ್ಯಕ್ಷರಾದ ಶ್ರೀ ಗುರುಸ್ವಾಮಿಜಿ, ಶ್ರೀ ಶಿವರುದ್ರ ಸ್ವಾಮೀಜಿ, ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹನೂರು ಶಾಸಕ ಆರ್. ನರೇಂದ್ರ, ಮಾಜಿ ಶಾಸಕಿ ಪರಿಮಳ ನಾಗಪ್ಪ, ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ ಕುಮಾರ್ ಹಾಗೂ ಉತ್ತರಾಧಿಕಾರಿ ಆಯ್ಕೆ ಸಮಿತಿಯ ಪದಾಧಿಕಾರಿಗಳು, ವಿವಿಧ ಮಠಾಧೀಶರು ಭಾಗವಹಿಸಿದ್ದರು.
